ಅಲ್ಲಾರಖಾ 1919-2000, ಹಿಂದೂಸ್ಥಾನಿ ಸಂಗೀತದ ಅವಿಭಾಜ್ಯ ಅಂಗವಾದ ತಬಲಾ ವಾದನಕ್ಕೆ ತಾರಾಮೌಲ್ಯ ತಂದು ಕೊಟ್ಟವರು. ಉಸ್ತಾದ್ ಅಲ್ಲಾರಖಾ ಖುರೇಷಿ. ಪಂಜಾಬ್ ಫರಾಣಿಯ ಉಜ್ವಲ ಪರಂಪರೆಯನ್ನು, ರಾಷ್ಟ್ರದಲ್ಲಿ, ವಿದೇಶದಲ್ಲಿ ಬೆಳಗಿಸಿದ, ನಾದಲಯ ಪ್ರಪಂಚದ ಧ್ರುವತಾರೆ.
	
ಉಸ್ತಾದ ಅಲ್ಲಾರಖಾ ಖುರೇಷಿ ಜನಿಸಿದ್ದು 1919ರ ಏಪ್ರಿಲ್ 29ರಂದು ಜಮ್ಮು ಸಮೀಪದ ರತ್ನಘರ್‍ನಲ್ಲಿ. ಕಾಶ್ಮೀರದಲ್ಲಿ ನೆಲಸಿದ ಪಂಜಾಬಿ ಮೂಲದ ಕೃಷಿಕ ಕುಟುಂಬದಲ್ಲಿ. ತಂದೆ ಹಾಶಿಮ್ ಆಲಿಗೆ ಮಗನ ಸಂಗೀತದ ಗೀಳು ಕಂಡು ಅಚ್ಚರಿಯಾಗುತ್ತಿತ್ತು. ಎಳೆ ವಯಸ್ಸಿನ ಅಲ್ಲಾರಖಾ ಸಂಗೀತ ನಾಟಕಗಳಿಗೆ ತಕ್ಷಣ ಮನಸೋತು ಬಿಡುತ್ತಿದ್ದರು. ಮುಂದೆ ಅದೇ ಗೀಳಾಗಿ ಅಂಟಿಕೊಂಡಿತು. ಪರಿಣಾಮವಾಗಿ ತಮ್ಮ 16ನೆಯ ವಯಸ್ಸಿನಲ್ಲಿ ಅಲ್ಲಾರಖಾ ಪಠಾಣಕೋಟದ ನಾಟಕ ಕಂಪನಿಯೊಂದಕ್ಕೆ ಸೇರಿದರು. ಆ ದಿನಗಳಲ್ಲಿ ಪ್ರಸಿದ್ಧ ಸಂಗೀತಗಾರರು ನಾಟಕ ಕಂಪನಿಗಳನ್ನು ಆಶ್ರಯಿಸುತ್ತಿದ್ದರು. ಅಲ್ಲಾರಖಾ ಸೇರಿದ ನಾಟಕ ಕಂಪನಿಯಲ್ಲಿ ಖ್ಯಾತ ತಬಲಾವಾದಕ ಕಾದಿರಬಕ್ಷರ ಶಿಷ್ಯ ಲಾಲ್ ಮಹ್ಮದ್ ಇದ್ದರು. ಅಲ್ಲಾರಖಾ ಅವರ ಶಿಷ್ಯರಾಗಿ ತಬಲಾ ವಾದನವನ್ನು ಕರಗತ ಮಾಡಿಕೊಳ್ಳ ತೊಡಗಿದರು. 
	
ಕೆಲವು ವರ್ಷಗಳ ತರುವಾಯ ಆ ನಾಟಕ ಕಂಪನಿಯನ್ನು ತೊರೆದು ಗುರುದಾಸಪುರಕ್ಕೆ ಬಂದು ನೆಲೆ ನಿಂತರು. ಅಲ್ಲಿ ತಬಲಾ ಶಿಕ್ಷಣ ಸಂಸ್ಥೆಯೊಂದನ್ನು ತೆರೆದು ಅನೇಕ ವಿದ್ಯಾರ್ಥಿಗಳಿಗೆ ತಬಲಾವಾದನದ ಶಿಕ್ಷಣವನ್ನು ನೀಡಲಾರಂಭಿಸಿದರು. ಮುಂದೆ ಅವರು ಲಾಹೋರಿಗೆ ಸ್ಥಳಾಂತರಗೊಂಡಾಗ ತಮ್ಮ ಗುರುಗಳಾದ ಲಾಲ್‍ಮಹ್ಮದರ ಗುರು ಉಸ್ತಾದ ಕಾದಿರ್‍ಬಕ್ಷರಿಂದ ತಬಲಾವಾದನದಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಆಶಿಕ್‍ಖಾನರಲ್ಲಿ ಸಂಗೀತಾಭ್ಯಾಸ ನಡೆಸಿದರು. ಕಾದಿರಬಕ್ಷರ ಮಾರ್ಗದರ್ಶನ ಹಾಗೂ ತಮ್ಮ ಕಠಿಣ ಪರಿಶ್ರಮದಿಂದಾಗಿ ಅವರು ತಬಲಾವಾದನದಲ್ಲಿ ಪಾರಂಗತವಾದರು. 
	
ಲಾಹೋರ್ ದೆಹಲಿ ಆಕಾಶವಾಣಿಗಳು ಅವರ ತಬಲಾವಾದನವನ್ನು ಪ್ರಸಾರ ಮಾಡಿದ ಮೇಲಂತೂ ಅಲ್ಲಾರಖಾ ಮನೆಮಾತಾದರು. ಅನೇಕ ಖ್ಯಾತ ಸಂಗೀತಗಾರರಿಗೆ ಸಾಥಿ ಮಾಡುವ ಅವಕಾಶ ಇದೇ ಅವಧಿಯಲ್ಲಿ ಅವರಿಗೆ ಪ್ರಾಪ್ತವಾಯಿತು. 1936ರಲ್ಲಿ ದೆಹಲಿ ಆಕಾಶವಾಣಿ ನಿಲಯ ಸೇರಿದರು. 1937ರಲ್ಲಿ ಅವರು ಮುಂಬೈಗೆ ವಲಸೆ ಬಂದರು. ಅಲ್ಲಿನ ಆಕಾಶವಾಣಿಯ ನಿಲಯ ಕಲಾವಿದರಾಗಿ ನೇಮಕಗೊಂಡು ಅಲ್ಲಿಯೇ ನೆಲೆನಿಂತರು.
	
ಅಲ್ಲಾರಖಾ ಮುಂಬೈಗೆ ಬಂದ ನಂತರ ಅಲ್ಲಿನ ಚಲನಚಿತ್ರರಂಗದಿಂದ ಆಕರ್ಷಿತರಾದರು. ಚಲನಚಿತ್ರ ಪ್ರಪಂಚಕ್ಕೂ ಅಲ್ಲಾರಖಾರಂಥ ಸಂಗೀತಗಾರರ ಅಗತ್ಯವಿತ್ತು. ಶ್ರೇಷ್ಠ ಸಂಗೀತಗಾರರನ್ನು ಆಗಿನ ಸಿನಿಮಾ ಪ್ರಪಂಚ ತುಂಬ ಗೌರವಯುತವಾಗಿ ಕಾಣುತ್ತಿತ್ತು. ಅಲ್ಲಾರಖಾ ಮುಂಬೈ ಸಿನಿಮಾ ಪ್ರಪಂಚಕ್ಕೆ ತುಂಬಾ ನಿಕಟರಾದರು. ಅಪಾರ ಅವಕಾಶಗಳು ದೊರೆತವು. ಸಿನಿಮಾ ಪ್ರಪಂಚ ಅವರಿಗೆ ಕೀರ್ತಿ ಮತ್ತು ಸಂಪತ್ತನ್ನು ಹೇರಳವಾಗಿ ನೀಡಿತು. ತತ್ಪರಿಣಾಮ 1942ರಲ್ಲಿ ರೇಡಿಯೋ ಕೇಂದ್ರದ ನೌಕರಿಗೆ ರಾಜೀನಾಮೆ ನೀಡಿದರು.
	
ಅಲ್ಲಾರಖಾ ಚಲನಚಿತ್ರ ಪ್ರಪಂಚಕ್ಕೆ ಕಾಲಿಟ್ಟಾಗ ಅನೇಕ ಚಿತ್ರ ನಿರ್ಮಾಣ ಸಂಸ್ಥೆಗಳು ಅವರನ್ನು ಪೋಷಿಸಿದವು. ಆಗಿನ ಸನ್‍ರೈಸ್ ಪಿಕ್ಚರ್ಸ್, ಮೋಹನ್ ಸ್ಟುಡಿಯೋ, ಸಾದಿಕ್ ಪ್ರೊಡಕ್ಷನ್ ಇವೇ ಮೊದಲಾದ ಸಂಸ್ಥೆಗಳಲ್ಲಿ ಅವರು ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ರಂಗಮಹಲ ಸ್ಟುಡಿಯೋ ಅವರನ್ನು ಖಾಯಂ ಆಗಿ ಸಂಗೀತ ನಿರ್ದೇಶಕರೆಂದು ನೇಮಿಸಿಕೊಂಡಿತು.
	
ತಮಗೆ ದೊರೆತ ಕೀರ್ತಿ ಹಾಗೂ ಹಣಕ್ಕೆ ಜೋತು ಬಿದ್ದು ಸಂಗೀತ ಕ್ಷೇತ್ರವನ್ನು ಅಲ್ಲಾರಖಾ ಕಡೆಗಣಿಸಲಿಲ್ಲ. ಸಂಗೀತ ಕ್ಷೇತ್ರಕ್ಕೆ ಅಲ್ಲಾರಖಾರ ಕೊಡುಗೆ ಅಪಾರವಾದುದು. ರವಿಶಂಕರ್, ವಿಲಾಯತ್ ಖಾನ್‍ರಂತಹ ಮಹಾನ್ ಸಿತಾರ್ ವಿದ್ವಾಂಸರ ಸಾಥಿಯಾಗಿ ಅನೇಕ ಕಛೇರಿಗಳನ್ನು ನೀಡಿದ್ದಾರೆ. ಪಂಡಿತ್ ರವಿಶಂಕರರ ಸೀತಾರ ವಾದನಕ್ಕೆ ತಬಲಾ ಸಾಥಿದಾರರಾಗಿ ಅಲ್ಲಾರಖಾ ದೇಶ-ವಿದೇಶಗಳನ್ನು ಸುತ್ತಿದ್ದಾರೆ. ಇಪ್ಪತ್ತೈದು ವರ್ಷಗಳಿಗೂ ಹೆಚ್ಚಿನ ಅವಧಿಗೆ ರವಿಶಂಕರ ಸಾಥಿದಾರರಾಗಿ ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದಿದ್ದಾರೆ. ರವಿಶಂಕರ ಸಿತಾರದಲ್ಲಿ ಎಷ್ಟು ಖ್ಯಾತರೋ ಅಲ್ಲಾರಖಾ ತಬಲಾದಲ್ಲಿ ಅಷ್ಟೇ ಖ್ಯಾತರು. ಇವರಿಬ್ಬರೂ ನೀಡುತ್ತಿದ್ದ ಸಂಗೀತ ಕಾರ್ಯಕ್ರಮಗಳು ರಸಿಕರ ಪಾಲಿಗೆ ಭೂರಿ ಭೋಜನವಾಗಿರುತ್ತಿತ್ತು. ಎರಡು ಮೂರು ಗಂಟೆಗಳ ಕಾಲ ತನಿ ಕಛೇರಿ ನಡೆಸಿ ಜನರನ್ನು ಮಂತ್ರ ಮುಗ್ಧರನ್ನಾಗಿಸುವಂತಹ ವಾದನ ಕೌಶಲ ಉಸ್ತಾದ್ ಅಲ್ಲಾರಖ ಅವರದು.
	
ಉಸ್ತಾದ್ ಅಲ್ಲಾರಖಾ, ಕೇವಲ ಸಂಪ್ರದಾಯವಾದಿಗಳಾಗಿರಲಿಲ್ಲ. ರವಿಶಂಕರ್ ಜೊತೆ ನಡೆಸಿದ ವಿದೇಶ ಪ್ರವಾಸ ಕಾಲದಲ್ಲಿ, ಪಾಶ್ಚಿಮಾತ್ಯ ರಾಷ್ಟ್ರಗಳ, ಲಯ ವಾದ್ಯ ಸಂಪ್ರದಾಯಗಳಲ್ಲೂ ಆಸಕ್ತಿ ತೋರಿದರು. ಅಮೆರಿಕದ ಜಾಜ್ ಸಂಗೀತ ಪರಂಪರೆಯ ತಾಡನ ವಾದ್ಯಕಾರರಾದ ಬಡಿರಿಚ್ ಜೊತೆಗೂಡಿ, ಮಿಶ್ರ ಲಯ ಮಾಧುರ್ಯದ ಧ್ವನಿಮುದ್ರಿಕೆಯನ್ನು ಹೊರತಂದರು.
	
ಅಲ್ಲಾರಖಾ ತಾವೊಬ್ಬ ಶ್ರೇಷ್ಠ ಕಲಾಕಾರರಾಗಿದ್ದರೂ ಅತ್ಯಂತ ನಿಗರ್ವಿ. ಕುಮಾರಗಂಧರ್ವರು ಅಲಹಾಬಾದ ಸಂಗೀತ ಸಮ್ಮೇಳನದಲ್ಲಿ ಹಾಡಿದಾಗ, ತಾವಾಗಿಯೇ ತಬಲಾ ಸಾಥ್ ನೀಡಲು ಮುಂದಾದರು. ತಮಗಿಂತ ಕಿರಿಯರಾದ ಅವರನ್ನು ಪ್ರೋತ್ಸಾಹಿಸುವ ಸಜ್ಜನಿಕೆ ಪ್ರದರ್ಶಿಸಿದರು.
	
ಉಸ್ತಾದ ಅಲ್ಲಾರಖಾರ ತಬಲಾವಾದನದ ಅನೇಕ ಧ್ವನಿಸುರುಳಿ, ಅಡಕಮುದ್ರಿಕೆಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯ. 
	
ಅಲ್ಲಾರಖಾರ ಶಿಷ್ಯ ಸಂಪತ್ತು ಸಹ ತುಂಬ ಶ್ರೀಮಂತವಾದುದೇ. ಪಂಜಾಬಿ ಘರಾಣೆಯ ಕೀರ್ತಿಯನ್ನು ಬಾನೆತ್ತರಕ್ಕೆ ಕೊಂಡೊಯ್ದ ಶಿಷ್ಯಗಣವನ್ನು ಹೊಂದಿದ್ದರು. ಅವರಲ್ಲಿ ವಿಶೇಷವಾಗಿ ಉಲ್ಲೇಖನೀಯ ಹೆಸರು ಉಸ್ತಾದ ಝಕೀರ್ ಹುಸೇನರದು. ಕಿರುವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿವೆತ್ತ ಅಪ್ರತಿಮ ಪ್ರತಿಭೆ.  ಈತ, ಸಮಕಾಲೀನ ತಬಲಾವಾದಕರಲ್ಲಿ ಅಗ್ರಣ್ಯರು. ಝಕೀರ ಹುಸೇನ್ ಅಲ್ಲಾರಖಾನ ಹಿರಿಯ ಮಗನೂ ಹೌದು. ಫಜಲ್ ಖುರೇಷಿ ಇನ್ನೋರ್ವ ಉಲ್ಲೇಖನೀಯ ಶಿಷ್ಯ. ಅಲ್ಲಾರಖಾರ ಎರಡನೆ ಮಗ.
	
ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರ ಪ್ರಶಸ್ತಿಗಳು ಅವರಿಗೆ ಸಂದಿವೆ. ಕರ್ನಾಟಕ ಸರಕಾರದ ರಾಷ್ಟ್ರಮಟ್ಟದ ಟಿ. ಚೌಡಯ್ಯ ಪ್ರಶಸ್ತಿ (1999) ನೀಡಿ ಗೌರವಿಸಿದೆ. ಭಾರತ ಸಂಗೀತ ಕ್ಷೇತ್ರದ ಈ ಹಿರಿಯ ಚೇತನ ತಮ್ಮ 81ನೆಯ ವಯಸ್ಸಿನಲ್ಲಿ ಹೃದಯಾಘಾತದಿಂದ 2000ನೇ ಮಾರ್ಚ್ 2 ರಂದು ವಿಧಿವಶರಾದರು.
											
(ಶಿರೀಷ್ ಜೋಶಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ